ಸಹಕಾರ, ಅದು ಜಗತ್ತಿನ ದೃಷ್ಟಿಯಲ್ಲಿ ಒಂದು ಚಳುವಳಿ ಅಥವಾ ಸಮಾಜದ ಅಗತ್ಯತೆಯನ್ನು ಈಡೇರಿಸುವ ಒಂದು ವಿಭಿನ್ನ ಮತ್ತು ವಿಶೇಷವಾದ ಕ್ಷೇತ್ರವೆಂದೆನಿಸಿದರೂ ನಮಗೆ, ಭಾರತೀಯರಿಗೆ ಸಹಕಾರ ನಮ್ಮ ಸಂಸ್ಕೃತಿಯ ಒಂದು ಭಾಗ. ಮುಂದುವರಿದು ನಮ್ಮ ಸಂಸ್ಕಾರವೇ ಸಹಕಾರ ಎಂದು ಹೇಳಿದರೂ ತಪ್ಪಾಗಲಾರದು.
ಭಾರತೀಯರು ಸಹಕಾರ ಪದ್ಧತಿಯನ್ನು ಶಾಲೆಯಲ್ಲಿಯೋ ಅಥವಾ ಯಾವುದೋ ಪುಸ್ತಕಗಳನ್ನು ಓದಿ ಕಲಿಯಬೇಕೆಂದಿಲ್ಲಾ.
ನಮ್ಮ ತಾಯಿ ನಮಗೆ ಹೇಳಿಕೊಟ್ಟು ಬೆಳೆಸಿದ ಸಂಸ್ಕಾರಗಳಲ್ಲೇ ಸಹಕಾರವನ್ನು ಬೆರೆಸಿ ಹೇಳಿಕೊಟ್ಟಿರುತ್ತಾಳೆ.ಈ ಕಾರಣದಿಂದಲೇ ಇಂದು ಸಹಕಾರ ಭಾರತದಲ್ಲಿ ಇಷ್ಟು ವ್ಯಾಪಕ ಮತ್ತು ನಿರರ್ಗಳವಾಗಿ ಹರಡಿ ಸಹಕಾರದಿಂದ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂಬ ಮಟ್ಟಕ್ಕೆ ಬಂದು ನಿಂತಿರುವುದು.
ಹಾಗೇನೇ ಭಾರತ ಜಗತ್ತಿನೊಂದಿಗೆ ನಡೆದುಕೊಂಡು ಬಂದ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು “ನನಗಾಗಿ ನೀವು ನಿಮಗಾಗಿ ನಾನು ” ಎಂಬ ಸಹಕಾರ ತತ್ವದಂತೆಯೇ ಇದೆ.ಜಗತ್ತಿನ ಯಾವುದೇ ದೇಶದ ಅಗತ್ಯತೆಗೆ ಭಾರತ ಸಧಾ ನಿಸ್ವಾರ್ಥವಾಗಿ ಸ್ಪಂದಿಸುತ್ತಲೇ ಬಂದಿದೆ. ನಮ್ಮ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಯಾರು ನಮಗಾಗಿ ನಿಂತಿದ್ದರೋ ಅದೇ ಉತ್ಸಾಹದಿಂದ ಭಾರತ ಅವರೆಲ್ಲರ ಅಗತ್ಯತೆಗೆ ಕೈಜೋಡಿಸಿರುವುದು ಭಾರತದ ಸಹಕಾರಿ ನಿಲುವನ್ನು ವ್ಯಕ್ತಪಡಿಸುತ್ತದೆ.
ಇನ್ನೊಂದು ರೀತಿಯಲ್ಲಿ ಗಮನಿಸುವುದಾದರೆ, “ನಾವೆಲ್ಲಾ ಸೇರಿಕೊಂಡು , ನಮ್ಮೆಲ್ಲರ ಅಗತ್ಯತೆಯನ್ನು ಈಡೇರಿಸೋಣ ” ಎಂಬ ಸಹಕಾರಿ ಚಿಂತನೆಯಂತೆ ಅಭಿವೃದ್ಧಿಯ ವಿಚಾರ ಬಂದಾಗ ಭಾರತ ತನ್ನ ಮಿತ್ರ ರಾಷ್ಟ್ರಗಳ ಜೊತೆಗೂಡಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವುದೂ ಕೂಡ ಭಾರತದ ಸಹಕಾರಿ ಮನೋಭಾವವನ್ನು ತೋರಿಸುತ್ತದೆ.
ಈ ದೃಷ್ಟಿಕೋನದಿಂದ ನೋಡಿದಾಗ ತಾಯಿ ಭಾರತಿ ತನ್ನಲ್ಲಿರುವ ಸಹಕಾರವೆಂಬ ಸಂಸ್ಕಾರವನ್ನು ತನ್ನ ಮಕ್ಕಳಿಗೆ ಧಾರಾಕಾರವಾಗಿ ಹರಿಸಿದ್ದು ಕಾಣುತ್ತಾ ಹೋಗುತ್ತದೆ. ಹಾಗಾಗಿ, ಭಾರತಕ್ಕೆ ಮತ್ತು ಭಾರತೀಯರಿಗೆ ಸಹಕಾರ ಬರೀ ಕ್ಷೇತ್ರವಲ್ಲಾ! ಸಂಸ್ಕಾರವೇ ಸರಿ.
ಶ್ರೀ ಜಿತಿನ್ ಜಿಜೋ
ಕಾರ್ಯದರ್ಶಿ,
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ, ಮಂಗಳೂರು