100 ವರ್ಷಗಳ ಹಿಂದಿನ ಮಾತು, R.B.I. ಮತ್ತು ಬ್ಯಾಂಕ್ ಪ್ರಾರಂಭವಾಗಬೇಕಾಗಿತ್ತಷ್ಟೆ, ಸಮಾಜದ ವ್ಯಕ್ತಿಗಳ ವೈಯಕ್ತಿಕ ಆರ್ಥಿಕ ಅಗತ್ಯತೆಗಳನ್ನು ಪೂರೈಸಲು ಒಂದು ಆರ್ಥಿಕ ವ್ಯವಸ್ಥೆಯ ಅವಶ್ಯಕತೆ ಇದ್ದ ಕಾಲ. ಮಾನವ ಆಧುನಿಕ ಶಿಕ್ಷಣ ಪಡೆಯಲು, ಜ್ಞಾನಾರ್ಜನೆ ಮಾಡಲು, ಸಾಮಾನ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೂ ಹಣದ ಕೊರತೆ ಕಾಡುತ್ತಿದ್ದ ಕಾಲ. ವ್ಯಕ್ತಿಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಆಗ ಪ್ರಾರಂಭವಾಗಿದ್ದು ಸಹಕಾರ ಚಳುವಳಿ. ಹಾಗಾಗಿ ಸಹಕಾರ ಚಳುವಳಿಯ ಮೂಲ ಉದ್ದೇಶ ನಮ್ಮ ಸುತ್ತ ಮುತ್ತಲಿನ ಜನರ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ದಿನದಿoದ ದಿನಕ್ಕೆ, ನಿರಂತರವಾಗಿ ಉತ್ತಮಗೊಳಿಸುವುದು ಆಗಿರುತ್ತದೆ.
ಹೀಗಿರುವಾಗ, ಅದು ಹಾಲಿನ, ಮೀನಿನ, ಹಣಕಾಸಿನ, ಅಡಿಕೆಯ, ತೆಂಗಿನ, ಜೇನುತುಪ್ಪದ, ಯಾವುದೇ ರಾಜ್ಯಮಟ್ಟದ, ಬಹು ರಾಜ್ಯಗಳ, ಸಹಕಾರಿ ಕ್ಷೇತ್ರದ ರಾಜ್ಯ ಸಹಕಾರಿ ಇಲಾಖೆಗಳ ಕಾನೂನು ಕಟ್ಟಳೆ , ನೀತಿಗಳು ಅಥವಾ ಒಂದು ಸಹಕಾರ ಸoಸ್ಥೆಯ ನಿರ್ದೇಶಕ ಮಂಡಳಿಗಳು ತೆಗೆದುಕೊಳ್ಳುವ ಪ್ರತಿ ಒಂದು ನಿರ್ಣಯದ ಮೂಲ ಆಧಾರ ಯಾವತ್ತೂ “ಪ್ರತಿ ಸದಸ್ಯನ ಪ್ರಸ್ತುತ ಆರ್ಥಿಕ ಮಟ್ಟವನ್ನು ಮೇಲಕ್ಕೆ ಎತ್ತುವ ಏಕಮೇವ ಹಿನ್ನಲೆಯನ್ನು ಗಮನದಲ್ಲಿ ಇಟ್ಟುಕೊಂಡು ಯೋಜಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದಲ್ಲಿ ಸಹಕಾರಿ ಚಳುವಳಿಯ ಮೂಲ ಉದ್ದೇಶವೇ ಉಲ್ಲಂಘನೆ ಆದಂತೆ. ಆಲೋಚಿಸಿದ ಹಾಗೂ ರೂಪಿಸಿದ ಯೋಜನೆಗಳು , ಕಾನೂನು, ನೀತಿ ನಿಯಮಗಳು, ಸಹಕಾರಿ ಸಂಸ್ಥೆಗಳನ್ನು ಅವ್ಯವಹಾರಗಳ ದಿಕ್ಕಿನ ಕಡೆ ಪ್ರೇರೇಪಿಸುವ ಯೋಜನೆಗಳಾಗಿ ಮಾರ್ಪಾಡು ಆಗುವುದರಲ್ಲಿ ಸಂಶಯವಿಲ್ಲ.
ಸಹಕಾರೀ ಚಳುವಳಿಯ ಹಿರಿಯರು-ಅನುಭವಿಗಳು ಮತ್ತು ಇಂದಿನ ಯುವ ಸಹಕಾರಿಗಳೆಲ್ಲರೂ ಪ್ರತಿನಿತ್ಯ, ಪ್ರತಿ ಹೆಜ್ಜೆಯಲ್ಲೂ , ಪ್ರತಿ ಸಭೆಗಳಲ್ಲೂ ಗಮನದಲ್ಲಿ ಇಟ್ಟುಕೊಳ್ಳಬೇಕಿರುವ ಸಂಗತಿ. ಈ ತಿಂಗಳು ಅಥವಾ ಮುಂದಿನ ಮೂರು ತಿಂಗಳಲ್ಲಿ ನಮ್ಮ ಸಹಕಾರಿಯ ಚಟುವಟಿಕೆಗಳಿಂದ ನಮ್ಮ ಎಷ್ಟು ಸದಸ್ಯರ ಆರ್ಥಿಕ ಮಟ್ಟ , ಯಾವ ಸ್ಥರದಿಂದ ಯಾವ ಸ್ಥರಕ್ಕೆ ಏರಿಕೆ ಆಗಿರುತ್ತದೆ ಎಂಬ ಅವಲೋಕನ ಮಾಡುವ ಮತ್ತು ಅಂಕಿ ಅಂಶದ ಪಟ್ಟಿ ಇಡುವ ಅಭ್ಯಾಸವನ್ನು ಪ್ರಾರಂಭಿಸುವ ಅವಶ್ಯಕತೆ ಇದೆ. ಆಗ ಮಾತ್ರ ನಾವು ನಿಜವಾದ, ಸತ್ಯವಾದ ಸಹಕಾರಿ ಸಂಸ್ಧೆ ಮತ್ತು ಹೆಮ್ಮೆಯ ಸಹಕಾರಿ ಚಳುವಳಿಯ ಮೂಲ ಉದ್ದೇಶದ ಪಾಲುದಾರರಾಗುತ್ತೇವೆ. ಈ ಅಂಕಿ ಅಂಶಗಳನ್ನು ಪ್ರತಿ ವರ್ಷದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಪ್ರಸ್ತುತಪಡಿಸಿ ಮಾದರಿ ಸಂಸ್ಧೆ ರಚಿಸೊಣ.
ಅಲ್ಲದೇ ಬೇರೆ ಪಟ್ಟಿ ಮಾಡಬಹುದು,ಉದಾಹರಣೆಗಳು –
1) ಈ ತಿಂಗಳಲ್ಲಿ ಎಷ್ಟು ಸದಸ್ಯರಿಗೆ ನಮ್ಮ ಸಹಕಾರಿ ವ್ಯವಸ್ಥೆಯಿಂದಲೇ ಸ್ವಂತ ಉದ್ಯೋಗ ಶುರು ಆಗಿದೆ?.
2) ಈಗಾಗಲೇ ನಮ್ಮ ಸದಸ್ಯ ಸಹಕಾರಿಯ , ಸ್ವಂತ ಉದ್ಯೋಗದಲ್ಲಿ ನಿರತ ಸಹಕಾರಿಗಳ ಹಣಕಾಸಿನ ಮಟ್ಟ ಎಷ್ಟು ಉತ್ತಮವಾಯಿತು ಮತ್ತು ಅವರ ಸಂಖ್ಯೆ ಎಷ್ಟು?
3) ಆ ತಿಂಗಳಲ್ಲಿ ಅ ಉದ್ಯೋಗಿಗಳು ಹೆಚ್ಚಿನ ಎಷ್ಟು ಹೊಸ ಕೆಲಸಗಾರರನ್ನು ಸೇರಿಸಿ ಕೊಂಡಿದ್ದಾರೆ? ಮತ್ತು ಇತ್ಯಾದಿ .
4) ಈ ಮೇಲಿನ ಅಂಕಿ ಅಂಶಗಳು ತಿಂಗಳಿಂದ ತಿಂಗಳಿಗೆ ಹೆಚ್ಚು ಆಗಲು ನಿರ್ದೇಶಕ ಮಂಡಳಿ ನಿರಂತರ ಯೋಜನೆಯಲ್ಲಿ ನಿರತರಾಗೋಣ.
ಸಹಕಾರಿ ಚಳುವಳಿಯ ಮೂಲ ಉದ್ದೇಶವನ್ನು ನಾವು ಸಾಕಾರ ಮಾಡುವಲ್ಲಿ ಯಶಸ್ವಿ ಆಗೋಣವೆಂದು ದೇಶದ 30 ಕೋಟಿಗೂ ಹೆಚ್ಚು ಸಂಖ್ಯೆಯ ಸಹಕಾರಿ ಬಂಧುಗಳಲ್ಲಿ ಈ ಮೂಲಕ ವಿನಮ್ರ ನಿವೇದನೆ.
ಕೊನೆಯದಾಗಿ ಇನ್ನೊಮ್ಮೆ –
ಸಹಕಾರ ಚಳುವಳಿಯ ಮೂಲ ಉದ್ದೇಶ ” ನಮ್ಮ ಸುತ್ತಮುತ್ತಲಿನ ಜನರ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ದಿನದಿoದ ದಿನ ನಿರಂತರವಾಗಿ ಉತ್ತಮಗೊಳಿಸುವುದೇ ಆಗಿರುತ್ತದೆ”.
ಶ್ರೀ ಶ್ರೀಧರ ನೀಲಕಂಠ ರಾವ್.
ಅಧ್ಯಕ್ಷರು,
ಜ್ಞಾನ ಶಾಲೆ ಸೌಹಾರ್ದ ಸಹಕಾರಿ ನಿ.
ಬೆಂಗಳೂರು ಮಹಾನಗರ , ಗ್ರಾಮ ಮತ್ತು ರಾಮನಗರ ಜಿಲ್ಲೆಗಳ ಸೌಹಾರ್ದ ಸಹಕಾರಿಗಳ ಒಕ್ಕೂಟ.
ಸುಶ್ರುತಿ ಸೌಹಾರ್ದ ಸಹಕಾರಿ ಬ್ಯಾಂಕ್ ಠೇವಣಿದಾರರ ಸಂಘ.( ರಿ)
ರಾಜ್ಯ SHG ಪ್ರಕೋಷ್ಠ , ಸಹಕಾರ ಭಾರತಿ.