ಯಾವುದೇ ಕಾರ್ಯ ಚಟುವಟಕೆಗಳ ವೇಗ ಮತ್ತು ಶೈಲಿ ಬದಲಾಗಬೇಕಾದರೆ ಅಲ್ಲಿ ಯುವ ಮನಸ್ಥಿತಿ ಹಾಗೂ ಉತ್ಸಾಹ ಅಗತ್ಯ. ನಾನು ಇಲ್ಲಿ “ಯುವಕರು” ಎಂಬ ಪದದ ಬದಲು “ಯುವ ಮನಸ್ಥಿತಿ” ಎಂಬ ಪದವನ್ನು ಎಚ್ಚರದಿಂದಲೆ ಬಳಸಿದ್ದು.
ಯಾಕೆಂದರೆ ತಾರುಣ್ಯವಿದ್ದ ಮಾತ್ರಕ್ಕೆ ಅಲ್ಲಿ ಯುವ ಮನಸ್ಥಿತಿ ಇರಬೇಕೆಂದಿಲ್ಲ, ಕೆಲವು ಯುವಕರಂತು 20 ರಲ್ಲಿಯೇ ಜೀವನೋತ್ಸಾಹವನ್ನು ಕಳೆದು Retire ಆಗಿಬಿಡುತ್ತಾರೆ. ಅದೆಷ್ಟೋ ಎಪ್ಪತ್ತರ ಗಡಿಯಲ್ಲಿ ಇರುವ ಹಿರಿಮನಸ್ಸು ಯುವಮನಸ್ಥಿತಿಯದ್ದಾಗಿರಬಹುದು. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಅದುನಿಕತೆ ಎಂಬ ವಿಚಾರಬಂದಾಗ ಅದು ಸುತ್ತಿಬಳಸಿ ನಿಲ್ಲುವುದು ಆ ಮನೆಯ ತರುಣ ತರುಣಿಯಲ್ಲಿ. ಉದಾಹರಣೆಗೆ ಆ ಮನೆಯಲ್ಲಿ ಒಂದು ಹೊಸ ಟಿವಿ, ಮೊಬೈಲ್, ಫ್ರಿಡ್ಜ್ ನಿಂದ ಹಿಡಿದು ಆ ಮನೆಯಲ್ಲೊಂದು ಕಾರ್ಯಕ್ರಮ ನಡೆದರೆ ಅದರ ಉಸ್ತುವಾರಿಯತನಕ ನೋಡಿಕೊಳ್ಳುವುದು ಆ ಮನೆಯ ಜವಾಬ್ದಾರಿಯುತ ಯುವಕ/ಯುವತಿಯೇ. ಹಾಗೆಯೇ ಹೆಚ್ಚಾಗಿ ಹಿರಿಯರು ಹೇಳುವುದನ್ನು ಕೇಳಿದ್ದೇನೆ ಯುವಕರಿಗೆ ಪ್ರಬುದ್ಧತೆ ಬರುವುದು ಜವಾಬ್ದಾರಿಯನ್ನು ವಹಿಸಿಕೊಂಡಾಗ ಮಾತ್ರ. ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೆ ಇನ್ನು ವಿಷಯವನ್ನು ಆರಂಭಿಸುತ್ತೇನೆ “ಸಹಕಾರ ಕ್ಷೇತ್ರಕ್ಕೆ ಶಕ್ತಿಮದ್ದಾಗಬೇಕು ಯುವಶಕ್ತಿ !”
ಯಾವುದೇ ಸಮಸ್ಯೆ ಇದ್ದರೆ ಆ ಸಮಸ್ಯೆಯನ್ನು ಬಗಹರಿಸುವ ಅತ್ಯಂತ ಸುಲಭ ಮತ್ತು ಸೂಕ್ತ ವಿಧಾನವೇ ಅಲ್ಲಿ “ಸಹಕಾರ”ವನ್ನು ಪರಿಚಯಿಸುವುದು.ಸಹಕಾರ ಕ್ಷೇತ್ರ ಈ ಅಡಿಪಾಯದಲ್ಲೆ ತನ್ನ ನೆಲೆಯನ್ನು ವಿಸ್ತರಿಸಿಕೊಂಡು ಬಂದಿದೆ. ಹೀಗಿರುವಾಗ ಸಹಕಾರ ಕ್ಷೇತ್ರದಲ್ಲಿನ ಹೊಸ ಸವಾಲುಗಳನ್ನು ಬಗೆಹರಿಸುವುದು ಯಾರು ಮತ್ತು ಹೇಗೆ ಎಂಬುವುದು ಒಂದು ಆಶ್ಚರ್ಯಸೂಚಕ ಹಾಗೂ ಪ್ರಶ್ಣಾರ್ಥಕ ಚಿಹ್ನೆಯಾಗಿಯೆ ಉಳಿದಿದೆ !?
“Modern Problems require Modern Solutions”
ಆಧುನಿಕ ಸವಾಲುಗಳಿಗೆ ಆಧುನಿಕ ಪರಿಹಾರ, ಅನ್ನುವ ಮಾತೊಂದಿದೆ. ಈ ನಿಟ್ಟಿನಲ್ಲಿ ಯೋಚಿಸುವುದಾದರೆ, 21ನೇ ಶತಮಾನದ, 5g ಕಾಲದ ಬೆಳವಣಿಗೆಯ ವೇಗವನ್ನೂ ಗಮನಿಸುವಾಗ ಪ್ರಸ್ತುತ ಸಹಕಾರ ಕ್ಷೇತ್ರ ಯುವ ಮನಸ್ಥಿತಿಯ ಅಭಾವವನ್ನು ಎದುರಿಸುತ್ತಿದೆ ಎಂದರೆ ತಪ್ಪಾಗಲಾರದು. ಇದು ಯುವಕರಿಗೆ ಸಹಕಾರ ಕ್ಷೇತ್ರದ ಮಹತ್ವ ತಿಳಿಯದೆಯೋ ಅಥವಾ ಒಳಪ್ರವೇಶಿಸುವ ಬಾಗಿಲು ಕಾಣದಿರುವುದರಿಂದಲೋ ಅಥವಾ ಬಾಗಿಲಲ್ಲಿಯೇ ಏನಾದರು ಅಡೆ-ತಡೆ ಇದೆಯೇ ಎಂಬುವುದು ಈಗ ಸಹಕಾರ ಕ್ಷೇತ್ರವನ್ನು ಮುನ್ನಡೆಸುವವರು ಅವಲೋಕಿಸಲೇಬೇಕು. ನೋಡಿ , ಸಹಕಾರ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ಸಹಕಾರ ಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಅತ್ಯಂತ ಅಗತ್ಯ, ಈ ಹೊಸ ಪ್ರಯೋಗಗಳನ್ನು ಮಾಡುವ ಧೈರ್ಯ-ಇಚ್ಚಾಶಕ್ತಿ ಇರುವುದು “ಯುವಮನಸ್ಥಿತಿ”ಯನ್ನು ಹೊಂದಿದವರಿಗೆ ಮಾತ್ರ ಎಂಬುವುದನ್ನು ಮತ್ತೊಮ್ಮೆ Highlight ಮಾಡಿ ಹೇಳುತ್ತೇನೆ.
ಯುವಕರನ್ನು ಸಹಕಾರ ಕ್ಷೇತ್ರಕ್ಕೆ ಆಕರ್ಷಿಸುವುದು ಈ ಕಾಲಘಟ್ಟದಲ್ಲಿ ತುಂಬಾ ಅಗತ್ಯ. ಸ್ವಪ್ರೇರಿತವಾಗಿ ಅವರೇ ಸಹಕಾರ ಕ್ಷೇತ್ರವನ್ನು ಹುಡುಕಿಕೊಂಡು ಬರಬೇಕಾದರೂ ಮೊದಲಿಗೆ ಅವರಿಗೆ ಸಹಕಾರ ಕ್ಷೇತ್ರದ ಪರಿಚಯವಾಗಬೇಕಲ್ಲವೆ! ಈ ಸವಾಲಿಗೆ ಪರಿಹಾರ ಏನೆಂದರೆ, ಈ ಹಿಂದೆ ಹೇಗೆ ಮೊಳಹಳ್ಳಿ ಶಿವರಾಯರಂತಹ ಮಹಾತ್ಮರುಗಳು ಹೋದ ಕಡಯಲ್ಲೆಲ್ಲಾ ಸಂಘಗಳನ್ನು ಸ್ಥಾಪಿಸುತ್ತಾ ಹೋದರೋ ಅದೇ ರೀತಿಯಲ್ಲಿ ಶಾಲಾ – ಕಾಲೇಜು ಮಟ್ಟದಿಂದಲೇ ವಿಧ್ಯಾರ್ಥಿಗಳ ಸಹಕಾರ ಸಂಘಗಳ ಮರು ಸ್ಥಾಪನೆ ಆಗಬೇಕು ಅಥವಾ ಈ ಹಿಂದೆ ಆರಂಭವಾಗಿರುವ ವಿದ್ಯಾರ್ಥಿ ಸಹಕಾರ ಸಂಘಗಳಿಗೆ ಮರು ಜೀವ ತುಂಬಬೇಕು ಮತ್ತು ಅದನ್ನು ವಿಧ್ಯಾರ್ಥಿಗಳೇ ನಡೆಸಿಕೊಂಡು ಹೋಗುವ ರೀತಿಯಲ್ಲಿ ನೋಡಕೊಳ್ಳಬೇಕು. ಎಷ್ಟೋ ಬಾರಿ ಹೆಸರಿಗೊಂದು ವಿದ್ಯಾರ್ಥಿ ಸಹಕಾರ ಸಂಘವಿದ್ದು ಅದನ್ನು ಆ ಕಾಲೇಜಿನ ಆಡಳಿತ ಮಂಡಳಿಯೇ ನಡೆಸಿಕೊಂಡು ಹೋಗುವುದುಂಟು. ಹೀಗಾಗದೆ ಅದನ್ನು ವಿದ್ಯಾರ್ಥಿಗಳೇ ನಿಭಾಯಿಸಿಕೊಂಡು ಹೋಗುವಂತೆ ಮಾಡಿ , ಅದಕ್ಕೆ ಬೇಕಾದ ಸೂಕ್ತ ಸಲಹೆ – ಸೂಚನೆ – ಮಾರ್ಗದರ್ಶನಗಳನ್ನು ಅನುಭವವಿರುವ ಹಿರಿಯರು ಮಾಡಬೇಕು.
ಎಲ್ಲಾ ಕ್ಷೇತ್ರದಲ್ಲಿಯೂ ಸಾಮಾಜಿಕ ಜಾಲತಾಣಗಳಂತಹ ಆಧುನಿಕ ಮಾಧ್ಯಮಗಳ ಪರಿಣಾಮಕಾರಿ ಬಳಕೆ ಆಗುತ್ತಿರುವ ಹಾಗೆ ಸಹಕಾರ ಕ್ಷೇತ್ರದಲ್ಲೂ ಬಳಸಿಕೊಳ್ಳಬಹುದಾಗಿದೆ.
“ಈಗಿನ ಯುವಕರಿಗೆ ಇದರಲ್ಲಿ ಯಾವುದರಲ್ಲಿಯೂ Interest ಇಲ್ಲ ಸರ್ ! ” ಎಂಬ ಮಾತು ಬರುವುದಕ್ಕಿಂತ ಮುಂಚೆ ನಾನೆಷ್ಟು ಯುವಕರಿಗೆ ಸಹಕಾರವನ್ನು ಪರಿಚಯಿಸಿರುತ್ತೇನೆ ಎಂದು ಆತ್ಮಾಲೋಕನ ಮಾಡಿದರೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೋರಕ್ಕುತ್ತದೆ ಎಂದು ಭಾವಿಸುತ್ತೇನೆ.
ಇಷ್ಟೆಲ್ಲಾ ಹೇಳಿದ ಮೇಲೆ, ಕೊನೆಗೆ ಹೇಳುವುದೊಂದೇ.
“ತಾರುಣ್ಯವಿದ್ದ ಮಾತ್ರಕ್ಕೆ ಅಲ್ಲಿ ‘ಯುವ ಮನಸ್ಥಿತಿ’ ಇರಬೇಕೆಂದಿಲ್ಲಾ. ಅದೆಷ್ಟೋ ಹಿರಿಮನಸ್ಸುಗಳು ಯುವಮನಸ್ಥಿತಿಯನ್ನು ಹೊಂದಿಕೊಂಡಿರಬಹುದು”.
ಜಿತಿನ್ ಜಿಜೋ
ಕಾರ್ಯದರ್ಶಿ,
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ,
ಮಂಗಳೂರು