ನೋಡಿ ಸರ್, ನಾನೊಂದು ಸಾಧಾರಣ ಗ್ರಾಮೀಣ ಕುಟುಂಬದಿಂದ ಬೆಳೆದು ಬಂದ ಹೆಣ್ಣುಮಗಳು, ತಂದೆ ತಾಯಿ ತಮ್ಮಿಂದ ಸಾಧ್ಯಾವಾಗುವಷ್ಟು ವಿಧ್ಯಾಭ್ಯಾಸವನ್ನು ನೀಡಿದರು. ಆಮೇಲೆ ಮದುವೆ ಮಾಡಿಸಿ ಕಳುಹಿಸಿಕೊಟ್ರು. ಬಹುಶಃ ಆ ಕಾಲಗಟ್ಟದಲ್ಲಿ ಗ್ರಾಮೀಣ ಪ್ರದೇಶದಿಂದ ಹುಟ್ಟಿಬೆಳೆದು ಬಂದ ಹೆಣ್ಣು ಇದಕ್ಕಿಂತ ಹೆಚ್ಚು ಆಸೆಪಡುವುದು ಬಹಳ ಅಪರೂಪ ಅಥವಾ ಆಸೆ ಪಟ್ಟರೂ ಅವೆಲ್ಲಾ ನಡೆಯದ ಕನಸು ಎಂದು ಮನಸ್ಸಿನ ಒಂದು ಮೂಲೆಯಲ್ಲಿ ಬಿದ್ದು ಅಲ್ಲಿಯೇ ಕೊಳೆತುಬಿಡುತ್ತದೆ.ಮನೆಯಲ್ಲಿ ಸ್ವಲ್ಪ ಕಷ್ಟ ಇದ್ದದ್ದರಿಂದ ನನಗೆ ನನ್ನ ವಿಧ್ಯಾಭ್ಯಾಸವನ್ನು ಮುಂದುವರೆಸಲಿಕ್ಕಾಗಲಿಲ್ಲ, ಹತ್ತನೆಯ ತರಗತಿಯಲ್ಲಿಯೇ ನಿಲ್ಲಿಸಬೇಕಾಗಿ ಬಂತು. ನಾನು ಅಷ್ಷೇನು ಚೆನ್ನಾಗಿ ಓದುವ ವಿದ್ಯಾರ್ಥಿಯೂ ಆಗಿರಲಿಲ್ಲ, ಆದರೆ ಮುಂದೆ ಓದಬೇಕೆಂಬ ಆಸಕ್ತಿ ಇತ್ತು. ಮುಂದೆ ವೈವಾಹಿಕ ಜೀವನದ ಜವಾಬ್ದಾರಿಯನ್ನು ನಿಭಾಯಿಸುವುದೇ ಪ್ರಮುಖವಾಗಿಬಿಟ್ಟಿತು. ಈ ದೇಶದ ಸಾಮಾನ್ಯ ಗೃಹಿಣಿಯಂತೆ ನಾನು ನನ್ನ ಗಂಡನಿಗೆ ಬೆನ್ನೆಲುಬಾಗಿ ನಿಲ್ಲಬೇಕು, ಮಗನಿಗೆ ಒಳ್ಳೆ ವಿಧ್ಯಾಭ್ಯಾಸವನ್ನು ಕೊಡಬೇಕು, ಚೆನ್ನಾಗಿ ಮನೆ ನಡೆಸಿಕೊಂಡು ಹೋಗಬೇಕು, ಇವುಗಳೆ ನನ್ನ ಜೀವನೋದ್ದೇಶವಾಗಿತ್ತು.
ವಿವಾಹದ ನಂತರ ಯಾಕೋ ಹತ್ತನೆ ತರಗತಿಯಲ್ಲಿ ನಿಂತು ಹೋಗಿದ್ದ ನನ್ನ ವಿಧ್ಯಾಭ್ಯಾಸ ಮುಂದುವರೆಸಬೇಕೆಂದು ಅನಿಸಿತು, ಕೊನೆಯ ಪಕ್ಷ ಶಾಲೆಗೆ ಹೋಗುವ ಮಗನಿಗೆ ಹೇಳಿಕೊಡಲಿಕ್ಕಾದರೂ ನಾನು ಕಲಿಯ ಬೇಕಾದುದು ಅನಿವಾರ್ಯವಾಯಿತು. ಹತ್ತನೇ ತರಗತಿಯ ಪರೀಕ್ಷೆ ಬರೆದು ಉತ್ತೀರ್ಣಳಾದೆ, ಮುಂದೆ PUCಯನ್ನು ಮುಗಿಸಿಕೊಂಡೆ.ನನ್ನ ಯಜಮಾನರು ದಿನಸಿ ಅಂಗಡಿಯನ್ನು ನಡೆಸಿಕೊಂಡಿದ್ದರು. ನಮ್ಮದೇ ಅಂಗಡಿಯ ಪಕ್ಕದಲ್ಲಿ ಒಂದು ಸಹಕಾರ ಸಂಸ್ಥೆ ಆರಂಭಗೊಂಡಿತು May be ಅದೇ ಮೊದಲಬಾರಿಗೆ ಒಂದು ಸಹಕಾರಿ ಸಂಸ್ಥೆಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದ್ದು. ಹೀಗಿರುವಾಗ ಅದೇ ಸಂಸ್ಥೆಯಲ್ಲಿ ಒಂದು ಉದ್ಯೋಗಾವಕಾಶ ಇರುವುದನ್ನು ಅರಿತು ಅಲ್ಲಿ ಸೇರಿಕೊಂಡೆ.ವಿಪರ್ಯಾಸ ನೋಡಿ, ಈ ಜೀವನವೆಂಬ ನೌಕೆಯ ನಾವಿಕ ಯಾವಾಗ – ಹೇಗೆಲ್ಲ ದಿಕ್ಕು ಬದಲಿಸುತ್ತಾನೋ ಅವನಿಗೆ ಮಾತ್ರ ಗೊತ್ತಿರಲು ಸಾಧ್ಯ, ನನಗೆ ಈ ಬ್ಯಾಂಕು, ಲೆಕ್ಕ – ವಹಿವಾಟು ಮೊದಲಿನಿಂದಲೂ ಅಷ್ಟೊಂದು ಇಷ್ಟವಿರಲಿಲ್ಲ, ಮುಂದೆ ಅದೇ ವ್ಯವಹಾರವನ್ನು ಮಾಡುವ ಒಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸ ಬೇಕಾಗಬಹುದೆಂಬ ಯೋಚನೆ ಕನಸಿನಲ್ಲಿಯೂ ಬಂದಿರಲಿಕ್ಕಿಲ್ಲ.
ನೋಡಿ ಸಾಮಾನ್ಯವಾಗಿ ಒಂದು ಸಂಸ್ಥೆಯಲ್ಲಿ ಸೇರಿಕೊಂಡ ಆರಂಭದ ದಿನಗಳಲ್ಲಿ ಅಲ್ಲಿಗೆ ಹೊಂದಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ಆದರೆ, ಸಹಕಾರ ಸಂಸ್ಥೆಗಳಲ್ಲಿ ಅಲ್ಲಿನ ವಾತಾವರಣಕ್ಕೆ ಬೇಗನೆ ಹೊಂದಿಕೊಂಡುಬಿಡುತ್ತೇವೆ. ಅಲ್ಲಿ ವ್ಯವಹರಿಸುವ ಜನರು ನಮ್ಮವರೆಂಬ ಭಾವನೇ ಬಂದುಬಿಡುತ್ತದೆ. ನಮ್ಮ ಮುಂದೆ ಬಂದಿರುವ ಗ್ರಾಹಕರನ್ನು ನೋಡಿದಾಗ ತಮ್ಮ ಅಗತ್ಯಕ್ಕೆ ಸಾಲ ಪಡೆಯಲು ಬಂದ ನಮ್ಮ ಪರಿಚಯದವರೋ ಅಥವಾ ಸಂಬಂಧಿಕರಂತೆ ಕಾಣುತ್ತಾರೆ ಹಾಗಾಗಿ ಸಹಕಾರಿ ಸಂಸ್ಥೆಯ ವಾತಾವರಣಕ್ಕೆ ಬೇಗ ಹೊಂದಿಕೊಳ್ಳುತ್ತೆವೆ ಎಂದು ಹೇಳಿದೆ. ಮುಂದೆ Diploma in cooperative Management ಅನ್ನು ಮುಗಿಸಿಕೊಂಡು ಒಂದು ಸಹಕಾರಿ ಸಂಸ್ಥೆಯ ಪರಿಪೂರ್ಣ ಉದ್ಯೂಗಿಯಾಗಿ ಹೊರಗೆ ಬಂದೆ. ಬಹುಶಃ ಸಹಕಾರಿ ಸಂಸ್ಥೆಯ ಉದ್ಯೂಗಿ ಅನ್ನುವುದಕ್ಕಿಂತ, ನಾನೊಬ್ಬಳು “ಸಹಕಾರಿ” ಎಂದೆ ಹೇಳಿಕೊಳ್ಳುವುದು ಹೆಚ್ಚು ಸೂಕ್ತ ಎಂದು ಭಾವಿಸುತ್ತೇನೆ. ಇದೀಗ ೧೪ ವರ್ಷದಿಂದ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.
ಒಬ್ಬಾಕೆ ಗ್ರಾಮೀಣ ಮಹಿಳೆಗೆ ಉದ್ಯೋಗವನ್ನು ನಿರ್ವಹಿಸಲು ಅತ್ಯಂತ ಸೂಕ್ತ, ಸಹಕಾರ ಸಂಸ್ಥೆಗಳು ಅನುವುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಯಾವುದೇ ರೀತಿಯ ಅಭದ್ರತೆ ಇಲ್ಲಾ, ಯಾವಾಗ ಎಲ್ಲಿ ಬೇರೆ ಯಾವ ಊರಿಗೆ ವರ್ಗಾವಣೆ ಮಾಡಿ ಬಿಡುತ್ತಾರೋ ಎಂಬ ಭಯ ಇಲ್ಲಾ. ಮನೆಯವರೊಂದಿಗೆ ಇದ್ದು ಮನೆಯನ್ನು ನಿರ್ವಹಿಸಿಕೊಂಡು ಜೊತೆಗೆ ಉದ್ಯೋಗವನ್ನು ಮಾಡಲು ಇಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವಾಗ ಮಾತ್ರ ಸಾಧ್ಯ.ಅದೆಲ್ಲದಿಕ್ಕಿಂತ ಹೆಚ್ಚಾಗಿ ಸಹಾಕಾರ ಸಂಸ್ಥೆಗಳು ನಮ್ಮವರ ಅಗತ್ಯತೆಗಾಗಿ ನಮ್ಮಿಂದಲೇ ಆರಂಭಗೊಂಡಿರುವುದರಿಂದ, ಇಲ್ಲಿ ಪ್ರತಿಯೊಂದು ಗ್ರಾಹಕಾರಿಗೆ ಸೇವೆಯನ್ನು ನೀಡಿದಾಗ ನಮ್ಮವರ ಅಗತ್ಯಕ್ಕೆ ಸ್ಪಂದಿಸಲು ಸಾಧ್ಯವಾಯಿತಲ್ಲಾ ಎಂಬ ಅತ್ಮ ಸಂತೃಪ್ತಿ ಸಹಕಾರ ಸಂಸ್ಥೆಯ ಉದ್ಯೋಗಿಗೆ ಮಾತ್ರ ಸಿಗಲು ಸಾಧ್ಯ. ಗ್ರಾಮೀಣ ಪ್ರದೇಶದ ಜನತೆಗೆ ಸರ್ಕಾರಗಳಾಗಲಿ, ರಾಷ್ಟ್ರೀಕೃತ ಸಂಸ್ಥೆಗಳಾಗಲಿ ನೀಡಲು ಸಾಧ್ಯವಾಗದ ಸೇವೆಯನ್ನು ಸಹಕಾರಿ ಸಂಸ್ಥೆಗಳು ನೀಡಲು ಸಾಧ್ಯವಾಗುತ್ತಿರುವುದು ಅಲ್ಲಿನ ಉದ್ಯೂಗಿಗಳಿಗೆ ಮುಂದೆಕುಳಿತಿರುವ ಗ್ರಾಹಕ ನಮ್ಮವರೆಂದು ಭಾವನೆ ಇದ್ದ ಕಾರಣ ಮಾತ್ರ.
ಒಂದು ಹಣಕಾಸು ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಇರಬೇಕಾದರೆ ದೊಡ್ಡ ದೊಡ್ಡ ವಿಧ್ಯಾಭ್ಯಾಸವನ್ನು ಪಡೆದುಕೊಂಡಿರಬೇಕು ಎಂಬವರಲ್ಲಿ ಅಭಿಮಾನದಿಂದ ಹೇಳಿಕೊಳೂತ್ತೇನೆ ಸಹಕಾರಿ ಸಂಸ್ಥೆಗಳಲ್ಲಿ ವಿಧ್ಯಾಭ್ಯಾಸಕ್ಕಿಂತ ಹೆಚ್ಚು ಅನುಭವ, ಕೌಶಲ್ಯ ಮತ್ತು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣಕ್ಕೆ ಪ್ರಾಮುಖ್ಯತೆ ಇದೆ ಎಂದು. ಇಂದು ದೇಶದಾದ್ಯಂತ ಎಷ್ಟೋ ಮನೆಗಳಿಗೆ ಅನ್ನಕ್ಕೆ ಆಧಾರ ಈ ಸಹಕಾರ ಕ್ಷೇತ್ರ. ಅದರಲ್ಲು ಸಾಮಾನ್ಯ ಗ್ರಾಮೀಣ ಪ್ರದೇಶದ ಜನತೆಗೆ ಉದ್ಯೋಗದಾಸರೆಯನ್ನು ನೀಡಿ ಅವರ ಜೀವನ ಶೈಲಿಯನ್ನು ಮೇಲೆತ್ತುವುದು ಸಹಕಾರ ಕ್ಷೇತ್ರದಿಂದ ಆಗುವಂತಹ ಮಹತ್ಕಾರ್ಯ, ಇಂದು ʼಸರ್ಕಾರಿʼ ಉದ್ಯೋಗಕ್ಕೆ ಸರಿಸಮಾನವಾಗಿಯೇ ʼಸಹಕಾರಿʼ ಉದ್ಯೋಗಾವಕಾಶಗಳು ಬೆಳೆಯುತ್ತಿವೆ. ಸಹಕಾರ ಕ್ಷೇತ್ರದಲ್ಲಿ ಆಗುವ ಹೊಸ ಪ್ರಯೋಗಗಳು ಮತ್ತಷ್ಟೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಮತ್ತಷ್ಟೂ ಸೂಕ್ಷ್ಮವಾಗಿ ಗಮನಿಸಿದಾಗ, ಸಹಕಾರ ಕ್ಷೇತ್ರ ಇಂದು ಎಷ್ಟೇ ದೊಡ್ಡ ವಿಧ್ಯಾಭ್ಯಾಸವನ್ನು ಪಡೆದ ವ್ಯಕ್ತಿಗೂ ಅವನ ವಿಧ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ನೀಡವ ಸಾಮರ್ಥ್ಯವನ್ನು ಹೊಂದಿಕೊಂಡು ತನ್ನನ್ನು ಆಶ್ರಯಿಸಿ ಬಂದ ಎಲ್ಲರಿಗೂ ನೆರಳನ್ನು ನೀಡಬಲ್ಲ ಒಂದು ಹೆಮ್ಮರವಾಗಿ ಬೆಳೆದಿದೆ.
ಸಹಕಾರಿ ಸಂಸ್ಥೆಗಳ ಉದ್ಯೋಗಿಗಳು ರಾಷ್ಟ್ರೀಕೃತ ಅಥವಾ ಖಾಸಗಿ-ಕಾರ್ಪೊರೇಟ್ (Corporate) ಸಂಸ್ಥೆಗಳ ಉದ್ಯೋಗಿಗಳಷ್ಟೇ ಅಥವಾ ಅವರಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಚೆನ್ನಾಗಿ ತಮ್ಮ ಕಾರ್ಯವನ್ನು ನಿಭಾಯಿಸಬಲ್ಲರು. ಇದಕ್ಕೆ ಸಹಕಾರಿ ಸಂಸ್ಥೆಯ ಸಹಕಾರಿ ಮನೋಸ್ಥಿತಿಯೇ ಕಾರಣ ಯಾಕೆಂದರೆ ಇಲ್ಲಿ ಯಾರೂ ಉದ್ಯೋಗಿಗಳಲ್ಲಾ ಅವರೂ ನಮ್ಮವರೇ! ಏನಂತೀರ?
ಶ್ರೀಮತಿ ಶಾಂತಿ ಜಿಜೋ,
ಶಾಖಾ ವ್ಯವಸ್ಥಾಪಕರು,
ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಬೆಳ್ತಂಗಡಿ