ಒಂದು ಬಾರಿ ಭಾರತ ಬ್ರಿಟೀಷರ ಆಳ್ವಿಕೆಯಲ್ಲಿದ್ದ ಕಾಲಘಟ್ಟದ ಅಥವ, ಒಂದು 50 ವರ್ಷಗಳ ಹಿಂದಿನ ಭಾರತದ ಒಂದು ಸಣ್ಣ ಚಿತ್ರಣವನ್ನು ಕಲ್ಪಿಸಿಕೊಳ್ಳಿ. ಜನ ಸಾಮಾನ್ಯರು ಕಡುಬಡತನವನ್ನು ಎದುರಿಸುತ್ತಿದ್ದ ಸಂಧರ್ಬ. ಅವತ್ತು ದುಡಿದರೆ ಅವತ್ತು ಮನೆಯಲ್ಲಿ ಕೊಳುಣ್ಣಬಹುದು ಅನ್ನುವ ಪರಿಸ್ಥಿತಿ. ಅಂತದ್ದರಲ್ಲಿ ಹಾಲು, ತುಪ್ಪ, ಬೆಣ್ಣೆ ಅದೆಷ್ಟೋ ಮನೆಯೊಳಗೆ ಬಂದಿರಲಿಕ್ಕಿಲ್ಲ, ಎಲ್ಲೋ ಮನೆಯಲ್ಲಿ ಯಾರಾದರೂ ಗರ್ಭಣಿಯರಿದ್ದರೆ ಮಗುವಿಗಾಗಿ ತಂದ ದನದ/ಎಮ್ಮೆಯ ಹಾಲಿನ ಪರಿಮಳ ಬಂದರೆ ಬರಬಹುದು ಬಿಟ್ಟರೆ ಅವೆಲ್ಲಾ ಕೇವಲ ಶ್ರೀಮಂತ ವರ್ಗದ ಜನರಿಗಾಗಿ ಮಾಡಾಲ್ಪಡುವ ಉತ್ಪನ್ನಗಲಾಗಿದ್ದವು ಎಂದರೆ ತಪ್ಪಾಲಾರದೇನೋ. ಇದು ಆ ಕಾಲಘಟ್ಟದ ಕಡುಬಡವರ ಪರಿಸ್ಥಿತಿಯಾಗಿತ್ತು. ಆದರೆ ಇವತ್ತು ಎಷ್ಟೇ ಬಡವನಾಗಿದ್ದರು ಅವನ ದಿನ ಹಾಲಿನ ಚಹಾ/ಕಾಫಿ ಯನ್ನು ಹೀರುವ ಮೂಲಕವೇ ಅರಂಭವಾಗುವುದನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಈ ರೀತಿಯ ಸಾಮಾಜಿಕ ಬದಲಾವಣೆ ಅಲ್ಲಿ ಸಹಕಾರ ರಂಗದ ಪ್ರವೇಶದಿಂದ ಸಾಧ್ಯವಾಗಿದ್ದನ್ನು ನಾವು ಕಾಣಬಹುದು. ಹೌದು, ಜನಸಾಮಾನ್ಯರ ಕ್ಷೇತ್ರವೆಂದೇ ಗುರುತಿಸಿಕೊಂಡ ಸಹಾಕಾರ ಕ್ಷೇತ್ರ ಈ ದೇಶದ ಸಾಮಾನ್ಯರ ಜೀವನ ಶೈಲಿಯಲ್ಲಿ ಮಹತ್ತರದ ಬದಲಾವಣೆಗಳನ್ನು ತರುವುದರ ಮೂಲಕ ಸ್ವತಃ ಸರ್ಕಾರಗಳೇ ನೋಡಿ ಆಶ್ಚರ್ಯ ಪಟ್ಟಿದೆ, ಆಶ್ಚರ್ಯ ಪಡುತ್ತಿದೆ, ಮುಂದೆಯೂ ಆಶ್ಚರ್ಯ ಪಡಲಿವೆ.
ಅಂತಹ ಒಂದು ಮಹಾನ್ ಕ್ರಾಂತಿಯನ್ನು ದೇಶದಲ್ಲಿ ಎಬ್ಬಿಸಿದ ಹೆಮ್ಮೆಯ ಸಹಕಾರ ಸಂಸ್ಥೆಯೇ ‘ಆನಂದ್ ಮಿಲ್ಕ್ ಯೂನಿಯನ್ ಲಿ.’, ನಮ್ಮ ‘ಅಮೂಲ್ ‘. ಅಮುಲ್ ಸುಮಾರು ಐದು ದಶಕಗಳಿಂದ ದೇಶದ ಹಾಲಿನ ಮಾರುಕಟ್ಟೆಯನ್ನು ಆಳುತ್ತಿದೆ. AMUL the taste of India ದ ಇತಿಹಾಸ ಮತ್ತು ಯಶಸ್ಸು ಅಧ್ಯಯನ ಯೋಗ್ಯವಾದದ್ದು.ಈ ಸಂಸ್ಥೆ 1946 ರಲ್ಲಿ ರೂಪುಗೊಂಡಿತು ಮತ್ತು ಈಗ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ನೇತೃತ್ವದಲ್ಲಿ ಸಹಕಾರಿ ಬ್ರ್ಯಾಂಡ್ ಆಗಿ ಮೂಡಿಬಂದಿದೆ. ಅಮುಲ್ ಭಾರತದ ಶ್ವೇತ ಕ್ರಾಂತಿಗೆ ಮೂಲ ಕಾರಣವಾಯಿತು. ಮುಂದೆ ಆದು ಭಾರತದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿದೊಡ್ಡ ಉತ್ಪಾದಕ ಸಹಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿತು. ಹಾಗೆಯೇ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಹಾಲಿನ ಸಹಕಾರಿ ಬ್ಯಾಂಡ್ ಗಳಿಗೆ ಮಾದರಿಯಾಯಿತು.
ಅಮುಲ್ ಎಂಬ ಹೆಸರು ಸಂಸ್ಕೃತದ ‘ಅಮೂಲ್ಯ’ ಪದಕ್ಕೆ ಹತ್ತಿರವಾಗಿದೆ ಮತ್ತು ಅದರಂತೆಯೇ ಭಾರತದ ಸಹಕಾರ ರಂಗದ ಅಮೂಲ್ಯವಾದ ರತ್ನವೇ ಸರಿ.ಅಮುಲ್ ತನ್ನ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಪೂರೈಕೆ ಮಾಡಿದ್ದು ಮಾತ್ರವಲ್ಲದೆ ರೈತರಿಗೆ ಲಾಭದಾಯಕ ಆದಾಯವನ್ನು ಖಚಿತ ಪಡಿಸಿತು. ಹಾಲಿನ ಹೊರತಾಗಿ ಸಹ ಉತ್ಪನ್ನಗಳಾದ ಮೊಸರು, ಐಸ್ ಕ್ರೀಮ್‌ಗಳು, ಚೀಸ್ ಮುಂತಾದ ಬಹುತೇಕ ಮೌಲ್ಯವರ್ದಿತ ಹಾಲಿನ ಉತ್ಪನ್ನಗಳ ಉತ್ಪಾದನೆಗೆ ಅಮೂಲ್ ವೇದಿಕೆಯೂ ಆಯಿತು. ಮಾರುಕಟ್ಟೆಯಲ್ಲಿ ಈ ಅತ್ಯುತ್ತಮ ಪ್ರದರ್ಶನದಿಂದ ಭಾರತೀಯರ ಬಲವಾದ ನಂಬಿಕೆಯನ್ನು ಗಳಿಸುವುದಕ್ಕೆ ಸಾಧ್ಯವಾಯಿತು. ಇದರ ಬೆನ್ನೆಲುಬಾಗಿ ನಿಂತು ಬೆಳೆಸಿದ ಡಾ.ವರ್ಗೀಸ್ ಕುರಿಯನ್ ಭಾರತದಲ್ಲಿ ‘ಶ್ವೇತ ಕ್ರಾಂತಿಯ ಪಿತಾಮಹ’ ಎಂದು ಕರೆಸಿಕೊಂಡರು. ಅವರ ‘ಬಿಲಿಯನ್-ಲೀಟರ್ ಕಲ್ಪನೆ’ ಯು ಭಾರತವನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವನ್ನಾಗಿ ಮಾಡಿತು. ಅವರು ಯಾವಾಗಲೂ ಅಮುಲ್‌ನ ಮಾರ್ಗದರ್ಶಕರಾಗಿದ್ದರು ಮತ್ತು ಈ ಬ್ರ್ಯಾಂಡ್ ಅನ್ನು ಎಲ್ಲಾ ಹಾಲು ಉತ್ಪಾದಕರಿಗೆ ಸಂಬಂಧಿಸುವಂತೆ ಮಾಡುವ ಕನಸು ಕಂಡಿದ್ದರು.
ಇತಿಹಾಸಕ್ಕೆ ಹಿಂತಿರುಗಿ ಸುಮಾರು 6 ದಶಕಗಳ ಹಿಂದೆ ನೋಡಿದಾಗ ಗುಜರಾತಿನ ಕೈರಾದ ರೈತರು ತಮ್ಮ ಕೆಟ್ಟ ಆರ್ಥಿಕ ಪರಿಸ್ಥಿತಿಗಳಿಂದ ತುಂಬಾ ತೊಂದರೆಗೀಡಾಗಿದ್ದರು. ಅವರ ಆದಾಯವು ಹೆಚ್ಚಾಗಿ ಅವರ ಕಾಲೋಚಿತ ಬೆಳೆಗಳಿಂದ ಬರುವುದರಿಂದ ಅವರು ಆಫ್-ಸೀಸನ್‌ನಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗಿತ್ತು. ಅವರು ಮಧ್ಯವರ್ತಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹಾಲನ್ನು ಮಾರಾಟ ಮಾಡುತ್ತಿದ್ದರು. ಆದರೆ ಕಡಿಮೆ ಉಷ್ಣಾಂಶದಲ್ಲಿ ಹಾಲನ್ನು ಹೆಚ್ಚು ಕಾಲ ಶೇಖರಿಸಿಡಲು ಸಾಧ್ಯವಿಲ್ಲದ ಕಾರಣ, ಅವರು ಅದನ್ನು ಅತ್ಯಲ್ಪ ಬೆಲೆಗೆ ಮಾರಾಟ ಮಾಡಬೇಕಾಗಿ ಬರುತಿತ್ತು. ಗುತ್ತಿಗೆದಾರರು ಅಗ್ಗದ ದರದಲ್ಲಿ ಹಾಲನ್ನು ಖರೀದಿಸಿ ಅತಿ ಹೆಚ್ಚು ಲಾಭಕ್ಕೆ ಮಾರಾಟ ಮಾಡಿತಿದ್ದರು. ಹಾಲು ಉತ್ಪಾದಕ ರೈತರಿಗೆ ಮಾರಾಟ ದರದಲ್ಲಿ ಶೋಷಣೆಯಾಗಿ ಸಂಕಷ್ಟಕ್ಕೀಡಾಗಿದ್ದರು. ಇದರಿಂದ ಅಸಮಾಧಾನಗೊಂಡ ಹೆಚ್ಚಿನ ರೈತರು ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ನಾನ್ನುಡಿಯಂತೆ ಸಹಕಾರ ತತ್ವದಡಿ 1946ರಲ್ಲಿ ಗುಜರಾತಿನ ಕೈರಾ ಜಿಲ್ಲೆಯಲ್ಲಿ The Kaira District Co-operative Milk Producers Union Limited ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಕೇವಲ ಎರಡು ಗ್ರಾಮಗಳ ರೈತರುಗಳ 247 ಲೀಟರ್ ಹಾಲಿನೊಂದಿಗೆ ಆರಂಭಗೊಂಡು, ಮುಂದಕ್ಕೆ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ ನೊಂದಿಗೆ ವಿಲೀನವಾಗಿ ಪ್ರಸಿದ್ಧ ಅಮುಲ್ ಬ್ರಾಂಡ್ ಹೆಸರಿನೊಂದಿಗೆ ಪ್ರಚಾರವನ್ನು ಪಡೆಯಿತು.
ಶ್ರೀ ತ್ರಿಭುವನ್ ದಾಸ್ ಪಟೇಲ್ , ಮೊರಾರ್ಜಿ ದೇಸಾಯಿ ಅಂತವರು ಇದಕ್ಕೆ ನೇತೃತ್ವವನ್ನು ನೀಡಿದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಸೂಕ್ತ ಮಾರ್ಗದರ್ಶನ ಮತ್ತು ಸಂಪೂರ್ಣ ಸಹಕಾರ ಇದರೊಂದಿಗೆ ಇತ್ತು. ಮುಂದೆ 1950ರಲ್ಲಿ ಈ ಡೈರಿ ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡ ಡಾ.ವರ್ಗೀಸ್ ಕುರಿಯನ್ ರವರ ಬದ್ಧತೆ ಮತ್ತು ವೃತ್ತಿಪರತೆಯಿಂದಾಗಿ ಅಮುಲ್ ಬ್ರಾಂಡ್ ಅಂತರಾಷ್ಟ್ರೀಯ ಮಾನ್ಯತೆಯನ್ನು ಪಡೆಯಿತು ಅಂತೆಯೇ ಡಾ. ವರ್ಗೀಸ್ ಕುರಿಯನ್ ರವರು ಶ್ವೇತ ಕ್ರಾಂತಿಯ ಪಿತಾಮಹ ಎಂದು ಕರೆಸಿಕೊಂಡರು. ಡಾ. ವರ್ಗೀಸ್ ಕುರಿಯನ್ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷರಾದರು(1965 ರಿಂದ 1998) . ಭಾರತದ ಶ್ವೇತ ಕ್ರಾಂತಿಯ ವಾಸ್ತುಶಿಲ್ಪಿ ಎಂದೆನಿಸಿಕೊಂಡರು. ಅವರ ಪ್ರಯತ್ನದಿಂದಾಗಿ ಭಾರತವು ಜಾಗತಿಕ ಮಟ್ಟದ ಅತಿ ದೊಡ್ಡ ಡೈರಿ ಉತ್ಪನ್ನಗಳ ತಯಾರಿಕಾ ರಾಷ್ಟ್ರವಾಗಿ ಹೊರಹೊಮ್ಮಿತು.
ಜನರ ಅಗತ್ಯತೆಯನ್ನು ಈಡೇರಿಸಲು ಮೊದಲು ಜನರ ಹೃದಯ ಮಿಡಿತವನ್ನು ಅರಿಯಬೇಕು. ಈ ವಿಚಾರದಲ್ಲಿ ಸಹಕಾರ ಸಂಸ್ಥಗಳು ಸದಾ ಮುಂಚೂಣಿಯಲ್ಲಿದೆ ಎಂಬುದನ್ನು ಮತ್ತೊಮ್ಮೆ ಅಮೂಲ್ ಸಂಸ್ಥೆ ಸಾಭೀತು ಪಡಿಸಿತು, ಯಾಕೆಂದರೆ ಇದು ನಮ್ಮವರಿಗಾಗಿ ನಾವೇ ನಡೆಸಿಕೊಂಡು ಹೋಗುವ ವ್ಯವಸ್ಥೆ.
ಸಂಪಾದಕೀಯ ತಂಡ
ಸಹಕಾರ ಸ್ಪಂದನ, ಮಂಗಳೂರು