ಭಾರತದ ಆರ್ಥಿಕತೆ, ಸಾಮಾಜಿಕತೆ, ಸಾಂಸ್ಕೃತಿಕ ಔನ್ನತ್ಯ ಪರಮ ವೈಭವದ ಕಡೆಗೆ ಹೋಗುತ್ತಿರುವುದರ ಹಿಂದೆ ಕೆಲಸ ಮಾಡಿದ್ದು ಸಹಕಾರ ತತ್ವ. ಭಾರತ ವಿಶ್ವಗುರುವಾಗುವತ್ತ ಮುನ್ನಡೆಯಲು ಕೈಹಿಡಿದು ಮುನ್ನಡೆಸಿದ್ದು ಸಹಕಾರ ತತ್ವ. ‘ತೊಟ್ಟಿಲಿನಿಂದ ಚಟ್ಟದವರೆಗೆ’ ಸಹಕಾರ ತತ್ವ, ಚಿಂತನೆಗಳ ವಿಸ್ತಾರ ಹರಹಿಕೊಂಡಿದೆ ಎಂಬ ಮಾತು ಕ್ಲೀಷೆಯಲ್ಲ. ಮುಂದೆ ಒಂದು ದಿನ ಭಾರತವೆ ವಿಶ್ವಕ್ಕೆ ಆಹಾರ ಪೂರೈಕೆ ಮಾಡುವ ದಿನಗಳು ಬರಲಿವೆ ಮತ್ತು ಅದರ ನೇತೃತ್ವವನ್ನು ಸಹಕಾರಿ ಕ್ಷೇತ್ರ ವಹಿಸಿಕೊಳ್ಳಲಿದೆ ಎಂಬುದು ಕೂಡ ಹಗುರವಾದ ಮಾತಲ್ಲ. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರದಲ್ಲಿ ಸಹಕಾರ ಕ್ಷೇತ್ರಕ್ಕೆ ಹೊಸ ಸಚಿವಾಲಯ ಬಂದಿದೆ. ಹೊಸ ಹಾದಿ ಹೊಸ ಹಜ್ಜೆಗಳನ್ನಿಡುವ ಮುನ್ನೋಟಗಳು ಅಲ್ಲಿಂದ ಮೂಡಲಾರಂಭಿಸಿವೆ.
ನಮ್ಮ ಬದುಕೇ ಸಹಕಾರ:
ಮಾನವನ ಬದುಕು ನಿಂತಿರುವುದೇ ಈ ಸಹಕಾರ ನಿಲುಮೆಯಿಂದ. ನಮ್ಮ ಹಿಂದಿನ ತಲೆಮಾರುಗಳನ್ನು ನೆನಪಿಸಿಕೊಳ್ಳೋಣ; ಅಲ್ಲಿ ಏನಿತ್ತು? ಅಲ್ಲಿ ಸಹಕಾರ ಮನೋಭಾವ ವಿಜೃಂಭಿಸುತ್ತಿತ್ತು. ಅವಿಭಕ್ತ ಕುಟುಂಬ ಅಥವ ಕೂಡುಕುಟುಂಬದ ಒಳಹೊಕ್ಕು ನೋಡಿದರೆ ಅಲ್ಲಿ ಸುಕ್ಕುಬಿಡಿಸಲಾರದಷ್ಟು ಸಹಕಾರ ತತ್ವಗಳು ಮತ್ತು ಕೆಲಸಗಳ ವರ್ಗೀಕರಣದ ಸೂತ್ರ ಹೆಣೆದುಕೊಂಡಿರುತ್ತವೆ. ಅಂದಿನ ಸಮಾಜ ಕೂಡ ಹಾಗೆ. ಕೃಷಿ, ವ್ಯವಸಾಯ, ಪಶುಪಾಲನೆ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವರು ಮಿಂದೇಳುತ್ತಿದ್ದದ್ದು ಸಹಕಾರ ತತ್ವಗಳ ಮೂಲಕವೆ. ಅಂದರೆ ಭಾರತದ ಅಂತಃಸ್ಥೈರ್ಯವೇ ಸಹಕಾರ. ನಮ್ಮ ಸಂಸ್ಕ್ರತಿ, ಪರಂಪರೆ, ಜನಜೀವನ ಎಲ್ಲವೂ ಈ ಸಹಕಾರ ಭಾವ ಬಂಧಗಳಲ್ಲಿ ಅಂತರ್ಗತವಾಗಿದೆ.
ಊರಿಗೆ ಊರೇ ಸಹಕಾರ:
ಹಿಂದಿನ ದಿನಗಳಲ್ಲಿ ಗದ್ದೆ ಬೇಸಾಯಗಳಿರುತ್ತಿತ್ತು. ಅದು ವಿಜ್ಞಾನ, ತಂತ್ರಜ್ಞಾನಗಳು ಇನ್ನೂ ಬೆಳೆಯದಿದ್ದ ಕಾಲ. ಉಳುಮೆ ಎತ್ತು ಅಥವ ಕೋಣಗಳ ಸಹಕಾರದಿಂದ ನಡೆಯುತ್ತಿತ್ತು. ದೊಡ್ಡ ಗದ್ದೆಗಳಾದರೆ ಒಂದು ಎರಡು ಜೊತೆ ಉಳುಮೆಯ ಎತ್ತು, ಕೋಣಗಳಿರುವ ಹೊಲದೊಡೆಯ ಹೆಚ್ಚು ದಿನಗಳ ಕಾಲ ವ್ಯವಸಾಯದಲ್ಲಿ ಉಳಿದುಕೊಳ್ಳುವುದನ್ನು ತಪ್ಪಿಸಲು ಹತ್ತಿರದ ಕೃಷಿಕ ತನ್ನ ಎತ್ತು ಅಥವ ಕೋಣಗಳನ್ನು ಉಳುಮೆಗೆ ತರುತ್ತಿದ್ದ. ತುಂಬ ದಿವಸಗಳ ಕಾಲ ಬೇಸಾಯದ ಕೆಲಸಗಳು ಉಳಿದುಕೊಳ್ಳುವುದನ್ನು ತಪ್ಪಿಸಲು ಇದು ಬಹಳಷ್ಟು ನೆರವಾಗುತ್ತಿದ್ದವು. ಕೇವಲ ಉಳುಮೆಗೆ ಮಾತ್ರವಲ್ಲ. ನೇಜಿ ನೆಡಲು, ಮುಂದೆ ಫಸಲು ಕೊಯ್ಲು ಮಾಡಲು ಕೂಡ ಹತ್ತಿರದ ಮನೆಯವರು ಸಹಕಾರಕ್ಕೆ ಬರುತ್ತಿದ್ದರು. ಯಾರು ಸಹಕಾರಕ್ಕೆ ಬಂದರೊ ಅವರ ಮನೆಗೆ ಈ ಮನೆಯಾತ ಹೋಗಬೇಕು ಇಲ್ಲವೆ ತನ್ನ ಬದಲು ಬೇರೆ ಜನ ಕಳಿಸಬೇಕು. ಇಲ್ಲಿ ಸಂಬಳಗಳ ಪ್ರಶ್ನೆ ಇಲ್ಲ. ಬದುಕಿನಲ್ಲಿ ಸಹಕಾರ ಹಾಸುಹೊಕ್ಕಾಗಿದ್ದ ಕಾಲವದು. ಮುಂದೆ ಕೂಡು ಕುಟುಂಬಗಳು ಅಳಿದು ಸಣ್ಣ ಕುಟುಂಬಗಳ ಕಡೆಗೆ ಒಲವು ಹೆಚ್ಚಿದಾಗ ಇದೆಲ್ಲ ಅಳಿದು ಹೋದವು. ಆಧುನಿಕ ಸಹಕಾರ ತತ್ವಗಳು ಹಿಂದಿನ ಬದುಕಿನಲ್ಲಿದ್ದ ಸಹಕಾರ ಮನೋಭಾವದ ತಳಹದಿಯಲ್ಲಿ ಬೆಳೆದು ನಿಂತವುಗಳು. ಮತ್ತೆ ಹಿಂದಿನ ತಲೆಮಾರುಗಳನ್ನು ಅನುಸರಿಸಿಕೊಂಡು ಬರುತ್ತಿದ್ದ ಸಹಕಾರದ ಬದುಕು ಆಧುನಿಕ ಬದುಕಿನೊಂದಿಗೆ ತಳಕು ಹಾಕಬಾರದೆಂದೇನಿಲ್ಲ.
ಸಹಕಾರ ಸುದಾರಿಕೆ:
ಕೆಲವೇ ವರ್ಷಗಳ ಹಿಂದೆ ಎಂದರೆ ಮದುವೆ ಆರತಕ್ಷತೆ ಸಮಾರಂಭಗಳು ಈಗಿನ ಹಾಗೆ ಸಭಾಭವನಗಳಲ್ಲಿ ಜರುಗುವುದಕ್ಕಿಂತ ಅತ್ಯದ್ಭುತವಾಗಿ ಸಹಕಾರ ಮನೋಭಾವ ಹಳ್ಳಿಗಳಲ್ಲಿತ್ತು. ಒಂದು ಮನೆಯಲ್ಲಿ ಸಮಾರಂಭವೊಂದು ನಡೆಯಲಿದೆ ಎಂಬ ಸುದ್ದಿ ಕೇಳಿಬಂದರೆ ಮುಗಿಯಿತು; ಆ ಮನೆಯವರಿಗೆ ಚಿಂತೆ ಇಲ್ಲ. ಸುತ್ತಮುತ್ತಲಿನ ಮನೆಯವರು, ಬಂಧುಮಿತ್ರರು ಸಮಾರಂಭದ ಬೇಕು ಬೇಡಗಳನ್ನು ನಿರ್ಣಯಿಸಿ ಯಾವ ಆತಂಕಗಳೂ ಮನೆಯವರಿಗೆ ಸೋಕದಂತೆ ಕಾರ್ಯಕ್ರಮ ಚಂದಗಾಣಿಸಿಕೊಡುತ್ತಿದ್ದರು. ವ್ಯಕ್ತಿಗತ ಸಹಕಾರ ಮಾತ್ರ ಅಲ್ಲ. ತರಕಾರಿ, ಹಾಲು, ಮಜ್ಜಿಗೆ, ಚಪ್ಪರದ ಸಾಮಾನುಗಳು, ಅಡುಗೆಗಾಗಿ ಪಾತ್ರೆಗಳು, ಕುಳಿತುಕೊಳ್ಳಲು ಚಾಪೆ, ಮರದ ಮಣೆ, ಬೇಕಿದ್ದರೆ ತಮ್ಮಲ್ಲಿಗೆ ಬರುವ ಕೆಲಸದವರು. ಹೀಗೆ ಅಲ್ಲಿಯ ಸಹಕಾರದ ಪಟ್ಟಿ ಒಂದೆರಡಲ್ಲ. ಮದುಮಗಳ ಅಲಂಕಾರಕ್ಕೆ ಬೇಕಾದ ಆಭರಣಗಳು ಕೂಡ ಜೋಪಾನವಾಗಿ ಬೇರೆ ಬೇರೆ ಮನೆಗಳಿಂದ ಬರುತ್ತಿತ್ತು. ಹಾಲು ಮಜ್ಜಿಗೆ ತಂದ ಪಾತ್ರೆಗಳು ಹಿಂದಿರುಗಿ ಹೋಗುವಾಗ ಖಾಲಿಯಾಗಿ ಹೋಗುತ್ತಿರಲಿಲ್ಲ. ಅದರೊಳಗೆ ಪಾಯಸ ತುಂಬಿ ಕೊಡುತ್ತಿದ್ದರು. ಮದುವೆಗೆ ಬರಲಾರದವರಿಗೆ ಅಂತ ಈ ಮರ್ಯಾದೆ.
ನೆಂಟರ ಸಹಕಾರ:
ಅಂದು ನೆಂಟರೆಲ್ಲ ಎರಡು ದಿವಸ ಮೊದಲು, ಇಲ್ಲವೇ ಆಮಂತ್ರಣದಲ್ಲಿ ಮುದ್ರಿಸುವಂತೆ ಒಪ್ಪೊತ್ತು ಮುಂಚಿತವಾಗಿ ಬರುತ್ತಿದ್ದರು. ಬಂದರೆ ಸುಮ್ಮನೆ ಅತಿಥಿಗಳ ಮರ್ಜಿಯಲ್ಲಿ ಅವರು ಇರುತ್ತಿದ್ದದಲ್ಲ. ಅದು ಇದು ನೋಡಿಕೊಂಡು ಯಾವ ಕೆಲಸ ಬಾಕಿ ಉಳಿದಿದೆ ಅದನ್ನು ಗುರುತಿಸಿ ಮಾಡಿಬಿಡುತ್ತಿದ್ದರು. ತರಕಾರಿಯನ್ನು ಹೆಚ್ಚಲು ನೆಂಟರು, ನೆರೆಕರೆಯವರು ಬಂದರೆ ಮಾತೇನು? ಕಥೆಗಳೇನು? ಗೌಜಿಯೋ ಗೌಜಿ. ಈ ಗೌಜಿ ಗದ್ದಲಗಳು ಸದ್ದಿಲ್ಲದೆ ಸಹಕಾರದ ಮಹತ್ವವನ್ನು ದಾಖಲಿಸುತ್ತಿದ್ದವು. ಸಮಾಜದೊಳಗೆ ಬಾಂಧವ್ಯವನ್ನು ಬೆಸೆಯುತ್ತಿದ್ದವು.
ಆದರೆ ಇಂದು ಸಹಕಾರ ತತ್ವ ಎಳಸು ಎಳಸಾಗಿದೆ. ಅದು ಕೇವಲ ಸಂಸ್ಥೆಗಳ ಮಟ್ಟಿಗೆ ಉಳಿದುಹೋಗುವ ಆತಂಕಗಳಿವೆ. ಜನಜೀವನದಲ್ಲಿ ಅದನ್ನು ಮತ್ತೆ ಪುನಃಪ್ರತಿಷ್ಠೆ ಮಾಡಿಕೊಂಡು ನಾವು ಬದುಕುವುದರ ಜೊತೆಗೆ ಇತರರಿಗೂ ಅವಕಾಶಗಳು ಸಿಗುವ ತರದಲ್ಲಿ ವ್ಯವಹರಿಸಿದರೆ ಬಾಳು ಬಂಗಾರವಾದೀತು. ನಮ್ಮ ಬದುಕಿನ ಎಲ್ಲ ಮಗ್ಗುಲುಗಳಲ್ಲಿ ಸಹಕಾರಿ ಮನೋಭಾವ ಮತ್ತೆ ವಿಜೃಂಭಿಸಬೇಕು. ಇದರಿಂದ ಆರೋಗ್ಯವಿದೆ, ನೆಮ್ಮದಿಯಿದೆ, ಬಾಂಧವ್ಯ ವೃದ್ಧಿಯಿದೆ, ಸಮಾಜಮುಖಿ ಚಿಂತನೆಗಳ ಮೇಳೈಸುವಿಕೆಯಿದೆ.
ಶಂಕರನಾರಾಯಣ ಖಂಡಿಗೆ.
‘ಶ್ಯಾಮಕೃಪಾ’ ನಾಗೋಡಿ
ಅಂಚೆ: ಪೆರ್ಲ – 671552
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ.