ಮೊನ್ನೆ ಒಂದು ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಸಭೆ. ಮಾಮೂಲಿ ಅಜೆಂಡಗಳು ಮುಗಿದು ಅಧ್ಯಕ್ಷರ ಅನುಮತಿ ಮೇರೆಗೆ ವಿಷಯಗಳ ಚರ್ಚೆ ಆರಂಭವಾದಾಗ ಒಬ್ಬ ನಿರ್ದೇಶಕರು ಅದೇ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೊ ವ್ಯವಹಾರದ ಲಾಭ ನಷ್ಟಗಳ ಲೆಕ್ಕ ಕೇಳಿದ್ದರು. ಕಾರ್ಯದರ್ಶಿ ಅದನ್ನು ಒದಗಿಸಿದಾಗ ಕ್ಯಾಂಪ್ಕೊ ವ್ಯವಹಾರದಿಂದ ಸಂಘಕ್ಕೆ ದೊಡ್ಡ ಮಟ್ಟಿನ ಲಾಭ ಆ ಅಂಕಿ-ಅಂಶಗಳಲ್ಲಿ ಕಂಡುಬರಲಿಲ್ಲ. ವಿಷಯವೆತ್ತಿದ ನಿರ್ದೇಶಕರು ’ಮತ್ತೆ ಯಾಕೆ ನಾವು ಕ್ಯಾಂಪ್ಕೊಜೊತೆಗೆ ಸಂಬಂಧ ಇಟ್ಟುಕೊಳ್ಳಬೇಕು. ಸರಿಯಾದ ಬಾಡಿಗೆ, ನಮ್ಮ ಸಿಬ್ಬಂದಿಗಳ ವೇತನದ ಖರ್ಚು ಹುಟ್ಟುವುದಿಲ್ಲ ಎಂದಾದರೆ ನಮ್ಮ ಎರಡು ಮೂರು ಕೋಣೆ ಸುಮ್ಮನೆ ವ್ಯರ್ಥ’ ಎಂಬ ಅಸಮಾಧಾನತೋರಿದರು.
ಅನುಭವದ ಕೊರತೆ
ಒಂದು ಸಹಕಾರಿ ಸಂಘದ ನಿರ್ದೇಶಕ ಈ ರೀತಿ ಮಾತನಾಡುವುದು ನಿಜವಾಗಿ ನೋಡಿದರೆ ಅನುಭವದ ಕೊರತೆ. ಸಂಸ್ಥೆಯ ಏಳು-ಬೀಳುಗಳಲ್ಲಿ ಆಡಳಿತಮಂಡಳಿಯ ಪ್ರತಿಯೊಬ್ಬ ನಿರ್ದೇಶಕನ ಮಹತ್ವಪೂರ್ಣ ಜವಾಬ್ದಾರಿ ಇದ್ದೇ ಇರುತ್ತದೆ. ಅದು ಒಬ್ಬ ಅಧ್ಯಕ್ಷನದ್ದೊ, ಉಪಾಧ್ಯಕ್ಷನದ್ದೊ ಅಥವ ಕಾರ್ಯದರ್ಶಿಯ ಜವಾಬ್ದಾರಿ ಮಾತ್ರ ಅಲ್ಲ. ಆ ಸಂಘದ ಸಿಬ್ಬಂದಿ ಮತ್ತು ನಿರ್ದೇಶಕ ಮಂಡಳಿ ನಿರಂತರ ಸಾಧನೆಯಲ್ಲಿದ್ದರಷ್ಟೆ ಸಹಕಾರಿ ಸಂಘವನ್ನು ಲಾಭದತ್ತ ಮತ್ತು ಸದಸ್ಯರಿಗೆ ಅನುಕೂಲಕರವಾಗಿ ಬೆಳೆಸಬಹುದಷ್ಟೆ.
ಖರೀದಿಗೆ ಅಡಿಕೆ ಸಂಘಕ್ಕೆ ಬಂದಾಗ ಪ್ರತಿ ಕಿಲೊ ಖರೀದಿಯ ಮೇಲೆ ಸಂಘಕ್ಕೆ ಕ್ಯಾಂಪ್ಕೊ ಕಮಿಶನ್ ಕೊಡುತ್ತದೆ. ಈ ಕಮಿಶನ್ ಗೋದಾಮಿನ ಬಾಡಿಗೆ, ಖರೀದಿಯ ಸಮಯದಲ್ಲಿ ಸಹಕಾರಿ ಸಂಘ ಒದಗಿಸುವ ಸಿಬ್ಬಂದಿಯ ವೇತನಕ್ಕೆ ಒದಗುತ್ತದೆ. ಖರೀದಿ ಕಡಿಮೆಯಾದರೆ ಸಹಕಾರಿ ಸಂಘಕ್ಕೆ ಕ್ಯಾಂಪ್ಕೊದಿಂದ ಲಭಿಸುವ ಕಮಿಶನ್ ಮೊತ್ತಕೂಡ ಕಡಿಮೆಯಾಗಿ ಸಿಬ್ಬಂದಿ ವೇತನವನ್ನು ಸಹಕಾರಿ ಸಂಘವೇ ಕೊಡಬೇಕಾದ ಅನಿವಾರ್ಯತೆ ಬರುತ್ತದೆ. ಮೇಲೆ ಉಲ್ಲೇಖಿಸಿದ ನಿರ್ದೇಶಕರ ಮಾತಿನಲ್ಲಿ ನಾವು ಕಾಣುವುದು ಅಪಕ್ವಅನುಭವ ಎಂಬುದು ಇಲ್ಲಿ ಉಲ್ಲೇಖನೀಯ. ಯಾಕೆಂದರೆ ಕ್ಯಾಂಪ್ಕೊಗೆ ಕೃಷಿ ಉತ್ಪನ್ನಗಳು ಖರೀದಿಗೆ ಹೆಚ್ಚು ಪ್ರಮಾಣದಲ್ಲಿ ಬಂದರೆ ಮಾತ್ರ ಸಹಕಾರಿ ಸಂಘಕ್ಕೆ ಲಾಭ.
ಮನವರಿಕೆ ಮಾಡುವುದು
ಇದಕ್ಕೆ ಇರುವ ಪರಿಹಾರವೆಂದರೆ ಈ ರೀತಿ ಮಾತನಾಡುವ ನಿರ್ದೇಶಕರಿಂದ ಹಿಡಿದು ಇಡೀ ಆಡಳಿತ ಮಂಡಳಿ ಹಾಗು ಸಹಕಾರಿ ಸಂಘದ ಸಿಬ್ಬಂದಿಗಳು ಗ್ರಾಹಕರ ಸಂಪರ್ಕ ಹೆಚ್ಚಿಸಿಕೊಳ್ಳಬೇಕು. ಸಾಮಾನ್ಯವಾಗಿ ಕೃಷಿಕರ ಸೇವಾ ಸಹಕಾರಿ ಸಂಘಗಳು ಕೃಷಿಕರಿಗೆ ಕೃಷಿ ಸಾಲ ಮಂಜೂರುಮಾಡುತ್ತವೆ. ಈ ರೀತಿ ಸಾಲ ಪಡೆದವರು ಕ್ಯಾಂಪ್ಕೊ ಶಾಖೆಗೆ ಅಡಿಕೆ ಹಾಕಬೇಕು ಎಂಬ ಒತ್ತಾಯ ಮಾಡಬಹುದು. ಸದಸ್ಯರ ಮನೆ ಮನೆ ಸಂಪರ್ಕ ಮಾಡಿ ಉತ್ಪಾದನೆಯ ಶೇಕಡಾ ಐವತ್ತನ್ನಾದರೂ ಕ್ಯಾಂಪ್ಕೊಗೆ ಮಾರಾಟ ಮಾಡಿದರೆ ಸಹಕಾರಿಸಂಘಕ್ಕೆ ಲಾಭವಿದೆ ಎಂಬುದನ್ನು ಮನದಟ್ಟು ಮಾಡಬಹುದು. ನಿರಂತರ ಒತ್ತಾಯ ಮಾಡಿದರೆ ಸದಸ್ಯರು ಅಡಿಕೆ ಮಾರಾಟಮಾಡಿಯೇ ಮಾಡುತ್ತಾರೆ. ಕೆಲವು ಸಹಕಾರಿ ಸಂಘಗಳು ಈ ಕ್ರಮಗಳನ್ನು ಅಳವಡಿಸಿಕೊಂಡು ಯಶಸ್ವಿಯಾದ ಉದಾಹರಣೆಗಳು ಇವೆ. ಸಹಕಾರಿ ಸಂಘ ನಮ್ಮದು. ಅದರ ಬೆಳವಣಿಗೆಯಲ್ಲಿ ನಮ್ಮ ಪಾಲು ಅನಿವಾರ್ಯ ಎಂಬ ಭಾವನೆಯನ್ನು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಸದಸ್ಯರಲ್ಲಿ ಬಿತ್ತಿಬಿಟ್ಟರೆಎಲ್ಲವೂ ಸಾಂಗವಾಗಿ ನಡೆಯುತ್ತವೆ.
ಸಾಲು ಸಾಲು ಲಾಭಗಳು
ಕ್ಯಾಂಪ್ಕೊ ಒಂದು ಸಹಕಾರಿ ಸಂಘದ ಆಶ್ರಯದಲ್ಲಿ ಕೃಷಿ ಉತ್ಪನ್ನ ಖರೀದಿ ಮಾಡಿದರೆ ಆ ಸಂಘಕ್ಕೆ ಅನೇಕ ಲಾಭಗಳಿವೆ. ಕ್ಯಾಂಪ್ಕೊಕ್ಕೆ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಹಣಕೊಡುವುದು ಸಹಕಾರಿ ಸಂಘ. ಹೆಚ್ಚಾಗಿ ಸಂಘದ ಸದಸ್ಯರೆ ಕ್ಯಾಂಪ್ಕೊಕ್ಕೆ ಕೂಡ ಬರುತ್ತಾರೆ. ಉತ್ಪನ್ನ ಮಾರಾಟ ಮಾಡಿದವರು ಕೆಲವೊಮ್ಮೆ ಪೂರ್ತಿ ಹಣವನ್ನು ಕೊಂಡುಹೋಗದೆ ಸಂಘದ ತಮ್ಮ ಖಾತೆಯಲ್ಲಿ ಹಾಕಿಡುತ್ತಾರೆ. ಅವಶ್ಯವಿದ್ದಷ್ಟೆ ಬೇಕಾದಾಗ ಕೊಂಡುಹೋಗುತ್ತಾರೆ. ಕೆಲವೊಮ್ಮೆ ಹಣವನ್ನು ನಿರಖು ಠೇವಣಿಯಲ್ಲಿ ಅಲ್ಲಿಯೆ ಇಡುತ್ತಾರೆ. ಕ್ಯಾಂಪ್ಕೊ ಸದಸ್ಯರು ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಜನರಿದ್ದರೆ ಪ್ರತಿಯೊಬ್ಬನ ಹೆಸರಿನಲ್ಲಿಯೂ ಅವರು ಅಡಿಕೆ ಮಾರಾಟಮಾಡಬಹುದು. ಹಾಗೆಯೇ ಅವರೆಲ್ಲ ಸಂಘದಲ್ಲಿ ಸದಸ್ಯರೂ ಆಗಬಹುದು ಜತೆಗೆ ಹೊಸ ಖಾತೆಗಳನ್ನೂ ತೆರೆಯಬಹುದು. ಇದೆಲ್ಲ ಕ್ಯಾಂಪ್ಕೊದಿಂದ ಸಹಕಾರಿ ಸಂಘಕ್ಕಾಗುವ ಲಾಭಗಳು. ಅದನ್ನು ಬೆಳೆಸುವ ಮತ್ತು ಉಳಿಸುವ ಜವಾಬ್ದಾರಿ ಆಡಳಿತ ಮಂಡಳಿಗೆ ಬೇಕು. ಕ್ಯಾಂಪ್ಕೊಜೊತೆ ವ್ಯವಹಾರ ಮಾಡಿ ನಮ್ಮ ಸಹಕಾರಿ ಸಂಘಕ್ಕೆ ನಷ್ಟ ಎನ್ನುವುದನ್ನು ಬಿಟ್ಟು ಹೆಚ್ಚು ಹೆಚ್ಚು ಖರೀದಿಗೆ ಬೇಕಾದ ಮಾರ್ಗೋಪಾಯಗಳನ್ನು ಜೋಡಿಸಿಕೊಳ್ಳುವುದು ಜಾಣತನ.
ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ಕೇರಳ ಮತ್ತು ಕರ್ನಾಟಕದಲ್ಲಿ ಅನೇಕ ಸಹಕಾರಿ ಸಂಘಗಳ ಆಶ್ರಯದಲ್ಲಿ ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸು ಖರೀದಿ ಮಾಡುತ್ತಿದೆ. ಹೆಚ್ಚಿನ ಕಡೆಗಳಲ್ಲಿ ವಾರದ ಆರೂ ದಿವಸಗಳಲ್ಲಿ ಅಡಿಕೆ ಖರೀದಿ ಮಾಡಿದರೆ ಉಳಿದೆಡೆ ಅಡಿಕೆಯ ಆವಕವನ್ನು ಪರಿಗಣಿಸಿ ವಾರದಲ್ಲಿ ಒಂದು, ಎರಡು, ಮೂರು, ನಾಲ್ಕು ಹೀಗೆ ಕಡಿಮೆ ದಿವಸಗಳಲ್ಲಿ ಖರೀದಿ ನಡೆಯುತ್ತಿದೆ.
– ಶಂ. ನಾ. ಖಂಡಿಗೆ
ಶಂಕರನಾರಾಯಣ ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ- 671552
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
(ಲೇಖಕರು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರು, ಮೊಬೈಲ್ : 09946406321)